ಬೆಂಥಮ್, ಜೆರಿಮಿ
1784-1832 ಬ್ರಿಟಿಷ್ ದಾರ್ಶನಿಕ, ತತ್ತ್ವಜ್ಞಾನಿ, ಅರ್ಥಶಾಸ್ತ್ರಜ್ಞ, ಸಮಾಜ ಸುಧಾರಕ, ಪ್ರಯೋಜನವಾದವೆಂಬ ತತ್ತ್ವ ಪ್ರಣಾಲಿಯನ್ನು ಪ್ರಾರಂಭಿಸಿದವರಲ್ಲಿ ಪ್ರಮುಖ. ಲಂಡನಿನಲ್ಲಿ ಜನನ. ನ್ಯಾಯಶಾಸ್ತ್ರ ಓದಿದರೂ ವೃತ್ತಿ ಮಾಡಲಿಲ್ಲ. ಆದರೆ ನ್ಯಾಯ ಸುಧಾರಣೆಗೆ ಶ್ರಮಿಸಿದ. ಜೀವನದ ಗುರಿ ಸುಖವೆಂಬುದನ್ನು ಪ್ರತಿಪಾದಿಸಿ ಅದರಲ್ಲಿ ಹೆಚ್ಚು ಕಡಿಮೆ ವ್ಯತ್ಯಾಸ ಮಾತ್ರ ಇರುತ್ತದೆಯಲ್ಲದೆ ಉತ್ತಮವಾದುದು ಆಧಮವಾದುದು ಅನ್ನುವ ವ್ಯತ್ಯಾಸವಿಲ್ಲ. ಸುಖವನ್ನು ಬಯಸುವವರು ಅದರ ವ್ಯಾಪ್ತಿ, ಆಳ, ನಿಶ್ಚಯ, ಸಾಫಲ್ಯಗಳನ್ನು ಗಣನೆಗೆ ತಂದುಕೊಳ್ಳಬೇಕು. ಅನಿಷ್ಟ ನಿವೃತ್ತಿ ಇಷ್ಟಪ್ರಾಪ್ತಿ ಇವುಗಳಿಗಾಗಿ ಜೀವಕೋಟಿಯೆಲ್ಲವೂ ಸತತವಾಗಿ ಯತ್ನಿಸುತ್ತವೆ. ಮನುಷ್ಯನ ನೈತಿಕ ಜೀವನದ ಗುರಿಯೆಲ್ಲವೂ ಸುಖಾಪೇಕ್ಷೆ. ನಮ್ಮ ಸುಖ ನಮಗೆ ಅಗತ್ಯವೆಂದು ತೋರಿದರೂ ಇತರರ ಸುಖವನ್ನೂ ನಾವು ಬಯಸುವುದು ನಮ್ಮ ಏಳಿಗೆಯಲ್ಲಿ ಒಂದು ಅವಶ್ಯ ಅಂಶ ಎನ್ನುತ್ತಾನೆ. ಈತ ಪ್ರತಿಪಾದಿಸಿದ ಜೀವನತತ್ತ್ವದಲ್ಲಿ ಸ್ವಾರ್ಥಕ್ಕೂ ಪರಾರ್ಥಕ್ಕೂ ಸಮನ್ವಯ ಸ್ಥಾಪಿಸಲು ಪ್ರಯತ್ನಿಸಿದ್ದಾನೆ. ಇವರ ವಿಚಾರಗಳು ಜೇಮ್ಸ್‍ವಿಲ್ ಮತ್ತು ಅವನ ಮಗ ಜಾನ್ ಸ್ಟುವರ್ಟ್ ವಿಲ್ ಇವರ ವಿಚಾರಸರಣಿಗೂ ದಾರಿ ಮಾಡಿಕೊಟ್ಟವು. 						 
(ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ